ಯೆಹೋವನ ಮಾತುಗಳು ಮೀಕನಿಗೆ ಬಂದವು. ಅರಸರಾದ ಯೋಥಾಮ, ಅಹಾಜ ಮತ್ತು ಹಿಜ್ಕೀಯರ ಆಳ್ವಿಕೆಯ ಸಮಯದಲ್ಲಿ ಇದು ನಡೆಯಿತು. ಇವರು ಯೆಹೂದ ರಾಜ್ಯದ ಅರಸರು. ಮೀಕನು ಮೋರೆಷೆತ್‌ನವನು. ಇವನು ಸಮಾರ್ಯ ಮತ್ತು ಜೆರುಸಲೇಮಿನ ವಿಷಯವಾಗಿ ದೇವದರ್ಶನವನ್ನು ಹೊಂದಿದನು.
ಇದಕ್ಕೆಲ್ಲಾ ಕಾರಣ ಯಾಕೋಬನ ಪಾಪಗಳೇ, ಇಸ್ರೇಲರ ದ್ರೋಹಗಳೇ! ಯಾಕೋಬು ಪಾಪಮಾಡಿದ್ದಕ್ಕೆ ಕಾರಣವೇನು? ಸಮಾರ್ಯವೇ ಕಾರಣ. ಯೆಹೂದದ ಎತ್ತರವಾದ ಸ್ಥಳ ಯಾವುದು? [*ಎತ್ತರವಾದ ಸ್ಥಳ ಪೂಜಾಸ್ಥಳ.] ಅದೇ ಜೆರುಸಲೇಮ್.
ಆದ್ದರಿಂದ ನಾನು ಸಮಾರ್ಯವನ್ನು ಕಲ್ಲಿನ ರಾಶಿಯನ್ನಾಗಿ ಮಾಡುವೆನು. ಅದು ದ್ರಾಕ್ಷಿಬಳ್ಳಿ ನೆಡಲು ಸಿದ್ಧವಾಗುವುದು. ಸಮಾರ್ಯದ ಕಲ್ಲುಗಳನ್ನೆಲ್ಲಾ ತಗ್ಗಿಗೆ ನೂಕಿಬಿಡುವೆನು; ಆಗ ಅಲ್ಲಿ ಕೇವಲ ಅಸ್ತಿವಾರಗಳು ಕಾಣುವವು.
ಆಕೆಯ ವಿಗ್ರಹಗಳೆಲ್ಲಾ ಒಡೆದು ಪುಡಿಮಾಡಲ್ಪಡುವವು. ಆಕೆಯ ಸೂಳೆತನದ ಹಣವು ಬೆಂಕಿಯಲ್ಲಿ ಸುಡಲ್ಪಡುವುದು. ಆಕೆಯ ಸುಳ್ಳುದೇವರ ವಿಗ್ರಹಗಳನ್ನೆಲ್ಲಾ ನಾಶಮಾಡುವೆನು. ಯಾಕೆಂದರೆ ಸಮಾರ್ಯ ನನಗೆ ಅಪನಂಬಿಗಸ್ತಳಾಗಿ ಧನಿಕಳಾದಳು. ನನಗೆ ನಂಬಿಗಸ್ತರಲ್ಲದವರು ಆಕೆಯಿಂದ ಅದನ್ನು ಕಸಿದುಕೊಳ್ಳುವರು.
ಶಾಫೀರ್‌ನಲ್ಲಿ ವಾಸಿಸುವವರೇ, ಬೆತ್ತಲೆಯಾಗಿ ನಾಚಿಕೆಯಿಂದ ನಡೆಯಿರಿ. ಚಾನಾನ್‌ನಲ್ಲಿ ವಾಸಿಸುವವರು ಹೊರಗೆ ಬರುವದಿಲ್ಲ. ಬೇತೇಚೆಲಿನ ಜನರು ಅಳುವರು, ನಿಮಗೆ ಅವರು ನೀಡುತ್ತಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳುವರು.
ಮಾರೇಷದಲ್ಲಿ ವಾಸಿಸುವ ಜನರೇ, ನಿಮಗೆ ವಿರುದ್ಧವಾಗಿ ನಾನು ಒಬ್ಬ ವ್ಯಕ್ತಿಯನ್ನು ಕರೆತರುವೆನು. ಅವನು ನಿಮ್ಮ ಬಳಿಯಲ್ಲಿರುವ ವಸ್ತುಗಳನ್ನು ಕಿತ್ತುಕೊಳ್ಳುವನು. ಇಸ್ರೇಲಿನ ಮಹಿಮೆಯು (ದೇವರ) ಅದುಲ್ಲಾಮಿಗೆ ಬರುವದು.
ನಿನ್ನ ಕೂದಲನ್ನು ಬೋಳಿಸು; ಯಾಕೆಂದರೆ ನೀನು ಪ್ರೀತಿಸುವ ಮಕ್ಕಳಿಗಾಗಿ ನೀನು ಅಳುವೆ. ಗಿಡುಗನಂತೆ ನಿನ್ನ ತಲೆ ಬೋಳಾಗಲಿ. ನಿನ್ನ ದುಃಖವನ್ನು ಪ್ರದರ್ಶಿಸು. ಯಾಕೆಂದರೆ ನಿನ್ನ ಮಕ್ಕಳು ನಿನ್ನಿಂದ ತೆಗೆಯಲ್ಪಡುವರು.